Monday, 11 July 2016

ಏಳು ಮಹತ್ವದ ಒಪ್ಪಂದಗಳಿಗೆ ಭಾರತ- ಕೀನ್ಯಾ ಸಹಿ


ನೈರೋಬಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೀನ್ಯಾ ಅಧ್ಯಕ್ಷ ಉಹುರು ಕೀನ್ಯಟ್ಟ ಅವರ ಸಮ್ಮುಖದಲ್ಲಿ ಭಾರತ ಮತ್ತು ಕೀನ್ಯಾ ಸೋಮವಾರ 7 ಮಹತ್ವದ ಒಪ್ಪಂದ/ ತಿಳುವಳಿಕೆ ಪತ್ರಗಳಿಗೆ ಸಹಿ ಮಾಡಿದವು.ಕೀನ್ಯಾ ಅಧ್ಯಕ್ಷ ಉಹುರು ಅವರ ಜೊತೆಗಿನ ಮಾತುಕತೆಗಳ ಬಳಿಕ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣೆ, ಸೈಬರ್ ಭದ್ರತೆ, ಮಾದಕ ದ್ರವ್ಯಗಳು ಹಾಗೂ ಮಾನವ ಕಳ್ಳಸಾಗಣೆ ಹಾವಳಿ ನಿವಾರಣೆ ನಿಟ್ಟಿನಲ್ಲಿ ರಕ್ಷಣಾ
ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ನಾವು ಒಪ್ಪಿದ್ದೇವೆ ಎಂದು ಹೇಳಿದರು.

ಭಯೋತ್ಪಾದನೆ ಎಲ್ಲರಿಗೂ ಸಮಾನ ಸವಾಲು. ಇದನ್ನು ಎದುರಿಸುವ ನಿಟ್ಟಿನಲ್ಲಿ ಪರಸ್ಪರ ಹಾಗೂ ಜಾಗತಿಕ ಮಟ್ಟದಲ್ಲಿ ಒಟ್ಟಾಗಿ ಶ್ರಮಿಸಲು ನಾವು ಒಪ್ಪಿದ್ದೇವೆ. ಭಾರತವು ಕೀನ್ಯಾದ ಅತ್ಯಂತ ದೊಡ್ಡ ವ್ಯಾಪಾರಿ ಪಾಲುದಾರನಾಗಿದ್ದು, ಎರಡನೇ ದೊಡ್ಡ ಹೂಡಿಕೆದಾರನೂ ಆಗಿದೆ ಎಂದು ಮೋದಿ ನುಡಿದರು. ಭಾರತ ಸರ್ಕಾರದ ರಕ್ಷಣಾ ಸಹಕಾರದ ಅಂಗವಾಗಿ ಕೀನ್ಯಾವು ಯುದ್ಧ ರಂಗದಲ್ಲಿ ಭಾರತದ ಒದಗಿಸಿದ ಆಂಬುಲೆನ್ಸ್​ಗಳನ್ನು ಬಳಸಲಿದೆ ಎಂದು ನುಡಿದ ಪ್ರಧಾನಿ, ಕೀನ್ಯಾದ ಅಭಿವೃದ್ಧಿ ಗುರಿ ಸಾಧನೆಗೆ ತನ್ನ ತಜ್ಞರು ಮತ್ತು ಅನುಭವವನ್ನು ಹಂಚಿಕೊಳ್ಳಲು ಭಾರತ ಸಿದ್ಧವಿದೆ ಎಂದು ಹೇಳಿದರು.

ಕೀನ್ಯಾ ಅಧ್ಯಕ್ಷರ ಜೊತೆಗೆ ಮರೆಯಲಾಗದಂತಹ ಸಂಭಾಷಣೆ ನಡೆಯಿತು. ನಮ್ಮ ಬಾಂಧವ್ಯ ಸುದೀರ್ಘವಾದದ್ದು. ಉಭಯ ರಾಷ್ಟ್ರಗಳೂ ವಸಾಹತುಶಾಹಿ ವಿರುದ್ಧ ಸಮರ ಸಾರಿದ್ದವು ಎಂದು ಮೋದಿ ನೆನಪಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿಯವರು 30 ಫೀಲ್ಡ್ ಅಂಬುಲೆನ್ಸ್​ಗಳನ್ನು ಕೀನ್ಯಾಕ್ಕೆ ಕೊಡುಗೆಯಾಗಿ ನೀಡಿದರು. ಇದಕ್ಕೂ ಮುನ್ನ ಬೆಳಗ್ಗೆ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಗಿತ್ತು.

1 comment: