Monday, 11 July 2016

ಮರ್ರೆ ವಿಂಬಲ್ಡನ್ ಚಾಂಪಿಯನ್


ಲಂಡನ್: ಬ್ರಿಟನ್ ಜನರ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿಶ್ವ ನಂ.2 ಆಂಡಿ ಮರ್ರೆ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆಂಡಿ ಮರ್ರೆ, ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಗೇರಿದ್ದ ಕೆನಡದ ಮಿಲೋಸ್ ರಾವೊನಿಕ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿದರು. ಈ ಮೂಲಕ ವೃತ್ತಿಜೀವನದ ಮೂರನೇ ಹಾಗೂ 2013ರ ಬಳಿಕ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.ಆಲ್ ಇಂಗ್ಲೆಂಡ್ ಕ್ಲಬ್​ನ ಸೆಂಟರ್ ಕೋರ್ಟ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮರ್ರೆ ಗೆಲುವಿಗಾಗಿ ಹೆಚ್ಚಿನ ಶ್ರಮ ಪಡುವ ಅಗತ್ಯವೇ ಬರಲಿಲ್ಲ.
ನಿರ್ಣಾಯಕ ಸಂದರ್ಭಗಳಲ್ಲಿ ಹಾಗೂ ಟೈ ಬ್ರೇಕರ್​ಗಳಲ್ಲಿ ಎಚ್ಚರಿಕೆಯ ಆಟವಾಡುತ್ತಿದ್ದ 29 ವರ್ಷದ ಮರ್ರೆ 6-4, 7-6 (7), 7-6 (7)ರಿಂದ ರಾವೊನಿಕ್​ರನ್ನು ಸೋಲಿಸಿದರು. ವಿಂಬಲ್ಡನ್​ನಲ್ಲಿ ತಮ್ಮ 2ನೇ ಪ್ರಶಸ್ತಿಗಾಗಿ ಮರ್ರೆ 2 ಗಂಟೆ 47 ನಿಮಿಷಗಳ ಕಾಲ ಬೆವರು ಹರಿಸಿದರು. ಸೆಮಿಫೈನಲ್​ನಲ್ಲಿ 17 ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ರೋಜರ್ ಫೆಡರರ್​ರನ್ನು ಸೋಲಿಸಿ ಚೊಚ್ಚಲ ಬಾರಿಗೆ ಫೈನಲ್​ಗೇರಿದ್ದ ರಾವೊನಿಕ್ ಗೆಲುವಿನ ಸಂಭ್ರಮ ಕಾಣಲು ವಿಫಲರಾದರು. ಮುಕ್ತ ಟೆನಿಸ್ ಯುಗದಲ್ಲಿ 1ಕ್ಕಿಂತ ಹೆಚ್ಚು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದ 12ನೇ ಆಟಗಾರ ಮರ್ರೆ.

ಮೊದಲ ಗೇಮ್ಲ್ಲಿ ಉತ್ತಮ ಆರಂಭ ಕಂಡಿದ್ದ ರಾವೊನಿಕ್ ಮೊದಲ 6 ಗೇಮ್ಳವರೆಗೂ ಸಮಬಲ ಸಾಧಿಸಿದ್ದರು. ಆದರೆ, 7ನೇ ಗೇಮ್ಲ್ಲಿ ಸರ್ವ್ ಬ್ರೇಕ್​ಗೆ ಒಳಗಾಗಿದ್ದರಿಂದ ಮರ್ರೆ ಮುನ್ನಡೆ ಕಂಡಿದ್ದರು. ಮೊದಲ ಸೆಟ್​ನಲ್ಲಿ 6 ಅನಿರ್ಬಂಧಿತ ತಪ್ಪುಗಳನ್ನು ಮಾಡಿದ ರಾವೊನಿಕ್ 4-6 ರಿಂದ ಸೋಲು ಕಂಡರು. 2ನೇ ಹಾಗೂ 3ನೇ ಸೆಟ್​ನಲ್ಲಿ ಕೆಚ್ಚಿನ ನಿರ್ವಹಣೆ ನೀಡಿದ ರಾವೊನಿಕ್, ಸರ್ವ್ ಬ್ರೇಕ್​ಗೆ ಒಳಗಾಗದೇ ಇದ್ದರೂ, ಪ್ರಮುಖ ಟೈ ಬ್ರೇಕ್ ಹಂತದಲ್ಲಿ ನಿರಾಸೆ ಕಂಡರು. ಇದು ಮರ್ರೆಗೆ ರಾವೊನಿಕ್ ವಿರುದ್ಧ 10ನೇ ಪಂದ್ಯದಲ್ಲಿ 7ನೇ ಗೆಲುವಾಗಿದೆ. ಟೈ ಬ್ರೇಕರ್​ನಲ್ಲಿ 3ನೇ ಸೆಟ್ ವಶಪಡಿಸಿಕೊಂಡ ಬೆನ್ನಲ್ಲೇ ಆಂಡಿ ಮರ್ರೆ ಹಾಗೂ ಕೋಚ್ ಇವಾನ್ ಲೆಂಡ್ಲ್ ಮೈದಾನದಲ್ಲೇ ಕಣ್ಣೀರಿಟ್ಟು ಗೆಲುವನ್ನು ಸಂಭ್ರಮಿಸಿದರು.

ಸಾಕಷ್ಟು ಕಠಿಣ ಸೋಲುಗಳ ಬಳಿಕ ಈ ಗೆಲುವು ಬಂದಿದೆ. ಮತ್ತೊಮ್ಮೆ ಈ ಟ್ರೋಫಿ ಮೇಲೆ ಕೈ ಇಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಕಳೆದೆರಡು ವಾರ ರಾವೊನಿಕ್ ಪಾಲಿಗೆ ಅತ್ಯುತ್ತಮವಾಗಿತ್ತು. ಫೆಡರರ್ ವಿರುದ್ಧದ ಅವರ ಪಂದ್ಯ ಅಮೋಘವಾಗಿತ್ತು.

 ಆಂಡಿ ಮರ್ರೆ

ಗ್ರಾಂಡ್ ಸ್ಲಾಂ ಫೈನಲ್ಸ್​ಗಳಲ್ಲಿ ಕೆಟ್ಟ ಇತಿಹಾಸ ಹೊಂದಿರುವ ಮರ್ರೆ, ಆಡಿದ 11ನೇ ಫೈನಲ್​ನಲ್ಲಿ 3ನೇ ಗೆಲುವು ಕಂಡರು.

ಲೆಂಡ್ಲ್ ಜತೆ ಮತ್ತೆ ಸಿಕ್ಕ ಯಶ

ವಿಂಬಲ್ಡನ್​ಗೂ ಮುನ್ನ ಕ್ವೀನ್ಸ್ ಕ್ಲಬ್ ಟೂರ್ನಿಯ ವೇಳೆ ಮರ್ರೆ ಕೋಚಿಂಗ್ ತಂಡ ಸೇರಿಕೊಂಡಿದ್ದ ಮಾಜಿ ಆಟಗಾರ ಇವಾನ್ ಲೆಂಡ್ಲ್ ಮತ್ತೆ ಜಾದೂ ಮಾಡಿದ್ದಾರೆ. ಮೊದಲ ಅವಧಿಗೆ ಮರ್ರೆ ಕೋಚ್ ಆಗಿದ್ದ ವೇಳೆ 2012ರ ಒಲಿಂಪಿಕ್ಸ್ ಸ್ವರ್ಣ, ಯುಎಸ್ ಓಪನ್, 2013ರ ವಿಂಬಲ್ಡನ್ ಗೆಲ್ಲಿಸಿಕೊಟ್ಟಿದ್ದರು. 2014ರ ಮಾರ್ಚ್ ವೇಳೆ ಲೆಂಡ್ಲ್​ರಿಂದ ದೂರವಾಗಿ ಅಮೇಲಿ ಮೌರಿಸ್ಮೋರಿಂದ ತರಬೇತಿ ಪಡೆಯುತ್ತಿದ್ದರು.

ಸೆರೇನಾಗೆ ಡಬಲ್ ಸಂಭ್ರಮ

ಸೆರೇನಾ ವಿಲಿಯಮ್್ಸ ಸಿಂಗಲ್ಸ್ ಬೆನ್ನಲ್ಲೇ ಡಬಲ್ಸ್ ವಿಭಾಗದಲ್ಲೂ ಅಕ್ಕ ವೀನಸ್ ವಿಲಿಯಮ್್ಸ ಜತೆಗೂಡಿ ಪ್ರಶಸ್ತಿ ಗೆಲ್ಲುವ ಮೂಲಕ ವಿಂಬಲ್ಡನ್​ನಲ್ಲಿ ಡಬಲ್ ಸಂಭ್ರಮ ಆಚರಿಸಿದ್ದಾರೆ. ಸಿಂಗಲ್ಸ್​ನಲ್ಲಿ 22ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದು ಸ್ಟೆಫಿಗ್ರಾಫ್ ದಾಖಲೆ ಸರಿಗಟ್ಟಿದ ಬಳಿಕ ಶನಿವಾರ ಸೆಂಟರ್​ಕೋರ್ಟ್​ನಲ್ಲೇ ನಡೆದ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ವೀನಸ್ ಜತೆಗೂಡಿ ಸೆರೇನಾ 6-3, 6-4 ನೇರಸೆಟ್​ಗಳಿಂದ ಹಂಗೆರಿಯ ಟಿಮಿಯಾ ಬಬೊಸ್ ಮತ್ತು ಕಜಾಕ್​ಸ್ತಾನದ ಯಾರೊಸ್ಲಾವ ಶ್ವೆಡೋವಾ ಜೋಡಿಯನ್ನು ಮಣಿಸಿದರು. ಸಹೋದರಿಯರು ಗೆದ್ದ 6ನೇ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಇದಾಗಿದೆ. ಒಟ್ಟಾರೆಯಾಗಿ ಅವರಿಗೆ ಇದು 14ನೇ ಡಬಲ್ಸ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಾಗಿದೆ. ಒಟ್ಟಾರೆಯಾಗಿ ಆಡಿದ 23 ಫೈನಲ್​ಗಳಲ್ಲಿ ಗೆಲುವಿನ ದಾಖಲೆ 22ಕ್ಕೆ ವಿಸ್ತರಿಸಿದೆ. 1999ರಲ್ಲಿ ಸ್ಯಾನ್ ಡಿಗೋದಲ್ಲಿ ಅಕ್ಕ-ತಂಗಿ ಜೋಡಿ ಏಕೈಕ ಫೈನಲ್ ಸೋತಿತ್ತು. ಕಳೆದ 2 ವರ್ಷಗಳಿಂದ ಡಬಲ್ಸ್​ನಲ್ಲಿ ಆಡದಿದ್ದ ಇವರು, ರಿಯೋ ಒಲಿಂಪಿಕ್ಸ್ ಸಿದ್ಧತೆಗಾಗಿ ಮತ್ತೆ ಜತೆಯಾಗಿದ್ದಾರೆ.

No comments:

Post a Comment