Monday, 11 July 2016

ನೇಪಾಳದ ಪ್ರಪ್ರಥಮ ಸರ್ವೋಚ್ಚ ಮಹಿಳಾ ನ್ಯಾಯಾಧೀಶರಾಗಿ ಸುಶೀಲಾ ಕಾರ್ಕಿ ನೇಮಕ



ಕಾಠ್ಮಂಡು,ಜು.10: ನೇಪಾಳದ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮಹಿಳಾ ನ್ಯಾಯಾಧೀಶರಾಗಿ ಸುಶೀಲಾ ಕಾರ್ಕಿ ನೇಮಕಗೊಂಡಿದ್ದಾರೆ. ಕಾರ್ಕಿ ಅವರ ನೇಮಕವನ್ನು ರವಿವಾರ ನೇಪಾಳ ಸಂಸತ್ ಅವಿರೋಧವಾಗಿ ಅಂಗೀಕರಿಸಿದೆ.ಹಿಮಾಲಯದ ರಾಷ್ಟ್ರವಾದ ನೇಪಾಳದಲ್ಲಿ ಅಧ್ಯಕ್ಷ ಹಾಗೂ ಸ್ಪೀಕರ್ ಹುದ್ದೆಗಳನ್ನು ಮಹಿಳೆಯರನ್ನು ಅಲಂಕರಿಸಿದ್ದಾರೆ. ಇದೀಗ ಸರ್ವೋಚ್ಚ ನ್ಯಾಯಾಧೀಶೆಯಾಗಿ ಕಾರ್ಕಿ ಅವರ ನೇಮಕದೊಂದಿಗೆ ಈ ಮೂರು ಪ್ರಮುಖ ಸ್ಥಾನಗಳು ಮಹಿಳೆಯರ ಪಾಲಾದಂತಾಗಿದೆ. ತನ್ನ ನೇಮಕಾತಿಯ ಬಳಿಕ ಸಂಸದೀಯ ಅಹವಾಲುಗಳ ವಿಶೇಷ
ಸಮಿತಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಧೀಶರ ಕೊರತೆಯಿಂದ ನೇಪಾಳವು ಭಾರೀ ಸಮಸ್ಯೆಯನ್ನೆದುರಿಸುತ್ತಿದೆಯೆಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಹವಾಲು ಸಮಿತಿಗೆ ಸೂಚಿಸಿದರು. ನೇಪಾಳದ ಸುಪ್ರೀಂಕೋರ್ಟ್ನಲ್ಲಿ ಪ್ರಸ್ತುತ 11 ನ್ಯಾಯಾಧೀಶ ಹುದ್ದೆಗಳು ಖಾಲಿಬಿದ್ದಿದೆ. ಈ ಹುದ್ದೆಗಳಿಗೆ ನಾಮನಿರ್ದೇಶನಗೊಂಡಿರುವವರು ಅಹವಾಲು ಸಮಿತಿಯ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಕಾರ್ಕಿ ಅವರನ್ನು ನೇಮಕಗೊಳಿಸುವಂತೆ ನೇಪಾಳದ ನ್ಯಾಯಾಂಗ ಮಂಡಳಿಯು ಎಪ್ರಿಲ್ 10ರಂದು ಶಿಫಾರಸು ಮಾಡಿತ್ತು.
ಕಾರ್ಕಿ ಅವರು ಈ ಮೊದಲು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿದ್ದಾಗ, ಮಹಿಳೆಯರಿಗೂ ತಮ್ಮ ಪೌರತ್ವದ ಹಕ್ಕುಗಳನ್ನು ಮಕ್ಕಳಿಗೆ ಹಸ್ತಾಂತರಿಸಲು ಅವಕಾಶ ಮಾಡಿಕೊಟ್ಟಿದ್ದರು.ಇದಕ್ಕೂ ಮುನ್ನ ಪೌರತ್ವದ ಹಕ್ಕುಗಳನ್ನು ಮಕ್ಕಳಿಗೆ ಹಸ್ತಾಂತರಿಸುವ ಅಧಿಕಾರವು ಪುರುಷರಿಗಷ್ಟೇ ಸೀಮಿತವಾಗಿತ್ತು.

No comments:

Post a Comment