Monday, 11 July 2016

ಪೋಷಕರೇ ನೀವೆಷ್ಟು ಪ್ರಬುದ್ಧರು?


ನಾನು ಓದುವುದಿಲ್ಲ, ನೀನು ಏನು ಮಾಡುತ್ತೀಯೋ ಅದನ್ನು ಮಾಡು’ - ಇದು ಯಾವುದೋ ಸಿನಿಮಾದ ಡೈಲಾಗ್ ಅಲ್ಲ. ಸುಶಿಕ್ಷಿತ ಕುಟುಂಬದ ಎಂಟು ವರ್ಷದ ಮುದ್ದಾದ ಹೆಣ್ಣುಮಗು ತನ್ನ ತಾಯಿಗೆ ತಿರುಗಿ ಹೇಳುವ ಮಾತು. ಹದಿಹರೆಯದ ಮಕ್ಕಳು ಕೆಲವೊಮ್ಮೆ ಈ ರೀತಿ ಹೇಳಿದರೆ ಅದು ಅಷ್ಟೊಂದು ಗಾಬರಿ ಪಡಬೇಕಾದ ವಿಷಯ ಆಗಲಾರದು.ಆ ರೀತಿ ಹೇಳಲು ಅನೇಕ ಕಾರಣಗಳನ್ನು ಕೊಡಬಹುದು.  ಆದರೆ ಕೋಮಲತೆ ಇನ್ನೂ ಜಾಗೃತವಾಗಿರುವ, ಮುಗ್ಧತೆಯೇ ಆಭರಣವಾಗಿ
ಇರಬೇಕಾದ ಎಂಟು ವರ್ಷದ ಹೆಣ್ಣು ಮಗಳು ಈ ರೀತಿ ಹೇಳುವುದನ್ನು ಕೇಳುವಂತಹ ಕಾಲಘಟ್ಟದಲ್ಲಿ ಇಂದಿನ ಪೋಷಕರು ಬಂದು ನಿಂತಿದ್ದಾರೆ.  ಈ ಮಗುವಿನ ಮಾತುಗಳು ಇಂದಿನ ಪೋಷಕತ್ವ (Parenting) ಮತ್ತು ಕಲಿಕೆ ಹೇಗೆ ಮತ್ತು ಎತ್ತ ಸಾಗುತ್ತಿದೆ ಎಂಬುದನ್ನು ಪ್ರತಿಫಲಿಸಿದೆ ಅಷ್ಟೆ.

30-40 ವರ್ಷಗಳ ಹಿಂದೆ ಇಲ್ಲದ ಅನೇಕ ಪೋಷಕತ್ವದ ಸವಾಲುಗಳನ್ನು ಇಂದಿನ ಪೋಷಕರು ಎದುರಿಸಬೇಕಾಗಿದೆ. ಪೋಷಕತ್ವವನ್ನು 21ನೇ ಶತಮಾನದ ಸವಾಲುಗಳಲ್ಲಿ ಒಂದಾಗಿ ಸೇರಿಸಿಕೊಳ್ಳಬಹುದು. ಒಂದು ಅಧ್ಯಯನದ ಪ್ರಕಾರ, ಬಹುತೇಕ ಪೋಷಕರು ಇಂದಿನ ಕಾಲದ ಪೋಷಕತ್ವವು ಕೆಲವು ದಶಕಗಳ ಹಿಂದೆ ಇದ್ದ ರೀತಿಗಿಂತ ಹೆಚ್ಚು ಒತ್ತಡಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಧ್ಯಯನಗಳಲ್ಲಿ ಈ  ಒತ್ತಡಕ್ಕೆ ಎರಡು ಪ್ರಮುಖ ಕಾರಣಗಳನ್ನು ನೀಡಲಾಗಿದೆ. ಒಂದನೆಯದ್ದು, ಇಂದಿನ ಶಿಕ್ಷಣ ವ್ಯವಸ್ಥೆ; ಎರಡನೆಯದ್ದು, ಮಾಧ್ಯಮಗಳು ಮತ್ತು ಸಮಾಜವು ಮಕ್ಕಳ ಮೇಲೆ ಬೀರುವ ಪ್ರಭಾವ.

ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಿರಿ. ಇವೆಲ್ಲವೂ ನನಗೆ ಕೌನ್ಸೆಲಿಂಗ್ ಸಂದರ್ಭದಲ್ಲಿ ಗಮನಕ್ಕೆ ಬಂದ ಕೇಸ್ ಸ್ಟಡಿಗಳಿಂದ ಆಯ್ದಂಥವುಗಳು:
ಮೂರು ವರ್ಷದ ಮಗು ಅಮ್ಮನನ್ನು ಸೇವಕಿಯಂತೆ ಕುಣಿಸುತ್ತಾಳೆ ಎಂದಾದರೆ ಅದಕ್ಕೆ ಕಾರಣ ಸರಿಯಾದ ಪೋಷಕತ್ವದ ಕೊರತೆ
ಒಂಬತ್ತು ತಿಂಗಳ ಮಗು ಮೊಬೈಲ್ ಕೈಗೆ ಬಂದೊಡನೆ ಅಳು ನಿಲ್ಲಿಸುತ್ತದೆ; ತೆಗೆದೊಡನೆ ಕಿರುಚುತ್ತದೆ. ಇದಕ್ಕೆ ಕಾರಣ ಯಾರು?
ಹತ್ತು ವರ್ಷದ ಮಗು ಐದು ತಿಂಗಳಿಂದ ಶಾಲೆಗೆ ಹೋಗುವುದಿಲ್ಲ ಎಂದು ಹಠಮಾಡಿ ಮನೆಯಲ್ಲಿ ಕೂತಿದೆ. ಅದಕ್ಕೆ ಕಾರಣ ಇಂದಿನ ಶಿಕ್ಷಣ ವ್ಯವಸ್ಥೆಯ ಲೋಪ ಮತ್ತು ಮನೆಯ ವಾತಾವರಣ.

ಅತಿ ಬುದ್ಧಿವಂತ ಮಗು ಶಾಲೆಯಲ್ಲಿ ‘ತಂಟೆಕೋರ’ ಎಂಬ ಹಣೆಪಟ್ಟಿ ಕಟ್ಟಲ್ಪಟ್ಟು ಶಿಕ್ಷಕರಿಂದ ನಿತ್ಯವೂ ಬೈಗಳು ಹಾಗೂ ಹೊಡೆತಗಳನ್ನು ತಿನ್ನಬೇಕಾದ ಪರಿಸ್ಥಿತಿ ಬಂದರೆ ಅದಕ್ಕೆ ಕಾರಣ ಮಗುವಿನ ಬುದ್ಧಿವಂತಿಕೆ ಗುರುತಿಸಲು ವಿಫಲರಾದ ಶಿಕ್ಷಕರು.
***
ಪೋಷಕತ್ವದ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಇವುಗಳು ನಮ್ಮ ಗೊಂದಲಗಳನ್ನು ತಕ್ಕ ಮಟ್ಟಿಗೆ ನಿವಾರಿಸಲು ಸಹಾಯಕವಾಗಬಹುದು.
ಇವುಗಳನ್ನು ತಿಳಿದುಕೊಂಡರೆ ನಾವು ಮಕ್ಕಳ ಕಲಿಕೆಗೆ ಸಹಾಯ ಮಾಡುವ  facilitator ಆಗಬಹುದು.

ಪೋಷಕರ ಜವಾಬ್ದಾರಿಗಳು
*ಮಗುವಿನ ಆವಶ್ಯಕತೆಗೆ ಪ್ರತಿಸ್ಪಂದಿಸುವುದು.
*ಮಗುವಿನೊಂದಿಗೆ ಆತ್ಮೀಯವಾಗಿರುವುದು.
*ಮಗು ಸ್ವತಂತ್ರವಾಗಿ ಬದುಕಲು ತಕ್ಕ ವಾತಾವರಣ ನಿರ್ಮಿಸುವುದು
*ಪ್ರತಿ ಮಗುವಿನ ವೈಯಕ್ತಿಕತೆಯನ್ನು ಸ್ವೀಕರಿಸುವುದು
*ಮಗುವಿನ ಆತ್ಮಗೌರವವನ್ನು ಪೋಷಿಸುವುದು
*ಪೋಷಕರಾಗಿ ನಮ್ಮ ಮಿತಿಗಳನ್ನು ಒಪ್ಪಿಕೊಳ್ಳುವುದು

ಮಕ್ಕಳ ಮನಃಶ್ಯಾಸ್ತ್ರವನ್ನು ಅಧ್ಯಯನ ಮಾಡಿರುವ ತಜ್ಞರು ನಾಲ್ಕು ತರದ ಪೋಷಕತ್ವದ ವಿಧಾನಗಳನ್ನು ಗುರುತಿಸಿದ್ದಾರೆ:
ಸರ್ವಾಧಿಕಾರಿ ವಿಧಾನ (Authoritarian type)   

ಈ ರೀತಿಯ ವಿಧಾನದಲ್ಲಿ ಮಕ್ಕಳನ್ನು ಬೆಳೆಸುವ ಪೋಷಕರು ನಿಗದಿಪಡಿಸಿದ ಸ್ಟಾಂಡರ್ಡ್‌ನಂತೆ ಮಕ್ಕಳು ಇರಲು ಬಯಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳಲ್ಲಿ ಉತ್ಕೃಷ್ಟತೆಯನ್ನು ಬಯಸುತ್ತಾರೆ. ಮಕ್ಕಳು ತಮ್ಮ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಯಸುತ್ತಾರೆ. ಮಕ್ಕಳಿಗೆ ಪ್ರಶ್ನಿಸುವ ಹಕ್ಕು ಇಲ್ಲ. ಇವರು ‘ನಾನು ಹೇಳುತ್ತೇನೆ - ನಾನು ಹೇಳಿದಂತೆ ನೀನು ಕೇಳಬೇಕು’ ಎನ್ನುವ ಮನೋಭಾವದವರು.

ಇಂತಹ ಪೋಷಕತ್ವದ ವಿಧಾನದಲ್ಲಿ ಬೆಳೆದ ಮಕ್ಕಳಲ್ಲಿ ಯಾವುದೇ ವೈಯಕ್ತಿಕತೆ ಬೆಳೆಯುವುದಿಲ್ಲ.  ಈ ಮಕ್ಕಳು ವಿಧೇಯ, ನಾಚಿಕೆ ಸ್ವಭಾವದ, ಇತರರೊಂದಿಗೆ ಬೆರೆಯದ, ಪ್ರೇರಣೆಯ ಕೊರತೆ ಇರುವ, ಆತ್ಮ ಗೌರವವಿಲ್ಲದ, ಸ್ವತಂತ್ರ ಚಿಂತನೆ ಇಲ್ಲದವರಾಗಿ, ಗೆಳೆಯರ ಮಧ್ಯೆ ಜನಪ್ರಿಯರಾಗದೆ ಬೆಳೆಯುತ್ತಾರೆ.

ಅಧಿಕಾರಯುತ ಪೋಷಕತ್ವ (Authoritative type)
ಇದು ಮಾದರಿ ಪೋಷಕತ್ವ ವಿಧಾನ. ಮಗು ಅದು ಇರುವ ರೀತಿಯಲ್ಲಿ ಒಪ್ಪಿಕೊಂಡು ಅದನ್ನು ಸ್ವತಂತ್ರ ವ್ಯಕ್ತಿಯಾಗಿ ರೂಪುಗೊಳಿಸುವುದು ಇದರ ಮುಖ್ಯ ಅಂಶ. ಪೋಷಕರು ಸ್ಪಷ್ಟವಾಗಿ ಮನೆಯ ನಿಯಮಗಳನ್ನು ಮಕ್ಕಳಿಗೆ ವಿವರಿಸುತ್ತಾರೆ.  ಮಕ್ಕಳ ಅಭಿಪ್ರಾಯ ಹಾಗೂ ಕೊಡುಗೆಯನ್ನು ಸ್ವೀಕರಿಸುತ್ತಾರೆ.  ಮನೆಯಲ್ಲಿ ಮುಕ್ತ ಸಂವಾದಕ್ಕೆ  ಎಲ್ಲ ಸಂವಹನದಾರಿಗಳನ್ನು ತೆರೆದಿಡುತ್ತಾರೆ.  ಆದರೆ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಅಧಿಕಾರಯುತವಾಗಿ ವರ್ತಿಸುತ್ತಾರೆ. ನಿಯಮಗಳನ್ನು ಬದಲಾಯಿಸುವುದಿಲ್ಲ.

ಅವು ಒಂದೇ ರೀತಿ ಇರುತ್ತವೆ. ಈ ರೀತಿಯ ಪೋಷಕತ್ವ ವಿಧಾನದಲ್ಲಿ ಬೆಳೆದ ಮಗು ಎಲ್ಲರೊಂದಿಗೂ ಒಳ್ಳೆಯ ರೀತಿಯಲ್ಲಿ ಹೊಂದಿಕೊಳ್ಳುತ್ತದೆ.  ಸಹಕಾರ ಮನೋಭಾವ ಇರುತ್ತದೆ. ಭಾವನಾತ್ಮಕವಾಗಿ ಸ್ಥಿರವಾಗಿ ಇದ್ದು ಉನ್ನತ ಆತ್ಮಗೌರವವನ್ನು ಹೊಂದಿರುತ್ತದೆ. ಸಾಧನೆ ಮಾಡುವ ಛಲ, ಸ್ವ ಪ್ರೇರಣೆ ಹಾಗೂ ಉತ್ತಮ ಸಾಮಾಜಿಕ ಕೌಶಲಗಳು ಈ ರೀತಿಯಲ್ಲಿ ಬೆಳೆದ ಮಗುವಿನಲ್ಲಿ ಇರುತ್ತವೆ.

ವಿಧೇಯ ಪೋಷಕತ್ವ (Submissive type)
ಈ ರೀತಿಯ ಪೋಷಕತ್ವದಲ್ಲಿ ಮಗು ಮನೆಯಲ್ಲಿ ಮೇಲುಗೈ ಸಾಧಿಸುತ್ತದೆ.  ಪೋಷಕರನ್ನು ಅಗೌರವದಿಂದ ನೋಡುತ್ತದೆ. ವಿಧೇಯತೆ ಇಲ್ಲದ, ಜವಾಬ್ದಾರಿ ಇಲ್ಲದ, ಅಜಾಗರೂಕ, ನಿಯಮ ಪಾಲಿಸದ ವ್ಯಕ್ತಿಯಾಗಿ ರೂಪುಗೊಳ್ಳುತ್ತದೆ.  ಮಕ್ಕಳ ಮೇಲಿನ ಅತಿ ಜಾಗರೂಕತೆಯ ವರ್ತನೆ ಇದಕ್ಕೆ ಕಾರಣ. ಮಕ್ಕಳು ತನ್ನನ್ನು ತಿರಸ್ಕರಿಸಿಯಾರು ಎಂಬ ಅತಿ ಭಯ ಕೂಡ ಈ ರೀತಿಯ ಪೋಷಕರಲ್ಲಿ ಇರುತ್ತದೆ.

ನಿಷ್ಕ್ರಿಯ ಪೋಷಕತ್ವ (Uninvolved type)
ಈ ರೀತಿಯ ಪೋಷಕತ್ವದಲ್ಲಿ ಪೋಷಕರು ಮಗುವಿನ ವಿಕಸನ ಪ್ರಕ್ರಿಯೆಯಲ್ಲಿ ಸಹಭಾಗಿಗಳಾಗುವುದಿಲ್ಲ.  ತಮ್ಮ ಜವಾಬ್ದಾರಿಯನ್ನು ಎಲ್ಲ ಕೇತ್ರಗಳಲ್ಲೂ ಮರೆತ ಅಥವಾ ಮಾದಕದ್ರವ್ಯ ವ್ಯಸನಿಪೋಷಕರು ಇವರಾಗಿರುತ್ತಾರೆ.
ಹದಿಹರೆಯದ ಮಕ್ಕಳು ಮತ್ತು ಪೋಷಕತ್ವ

ಹದಿಹರೆಯದ ಮಕ್ಕಳನ್ನು ಬೆಳೆಸಲು ಪೂರಕವಾಗುವ ಪೋಷಕತ್ವದ ಕೆಲವು ಧನಾತ್ಮಕ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು:
*ಹದಿಹರೆಯದ ಮಕ್ಕಳಿಗೆ ನಾವು ಸಹಸ್ಪಂದಿಗಳಾಗಬೇಕಾದರೆ ಹದಿಹರೆಯದ ಬಗ್ಗೆ ಸರಿಯಾದ ವೈಜ್ಞಾನಿಕ ಮಾಹಿತಿ ಪಡೆದ ಪೋಷಕರು ನಾವಾಗಬೇಕು.
*ನಮ್ಮ ಹದಿಹರೆಯದಲ್ಲಿ ನಾವು ಹೇಗೆ ಇದ್ದೆವು ಎಂಬುದನ್ನು ಆಗಾಗ ನೆನಪಿಸಿಕೊಳ್ಳಬೇಕು.
*ಪೋಷಕತ್ವದ ಬಗ್ಗೆ ಜ್ಞಾನವೃದ್ಧಿ ಮಾಡಿಕೊಳ್ಳಬೇಕು.
*ನಾವು ಮಾತನಾಡುವುದರ ಬದಲು ಹದಿಹರೆಯದ ಮಕ್ಕಳು ಹೇಳುವ, ಹಂಚಿಕೊಳ್ಳುವ ವಿಷಯಗಳನ್ನು ನಾವು ಕೇಳಬೇಕು.
*ಬದುಕಿನ ಸಂತೋಷ ಹಾಗೂ ಕಷ್ಟ ಎರಡರ ಬಗ್ಗೆಯೂ ಮಕ್ಕಳಿಗೆ ಅರಿವು ಮೂಡಿಸಬೇಕು.
*ಮಕ್ಕಳ ಕೆಟ್ಟ ವರ್ತನೆಯನ್ನು ಖಂಡನೆ ಮಾಡುತ್ತಲೇ ಇರುವುದಕ್ಕಿಂತ ಒಳ್ಳೆಯ ವರ್ತನೆಗೆ ಅಥವಾ ಒಳ್ಳೆಯ ಆಶಯಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುವುದು.

*ಹಕ್ಕು ಮತ್ತು ಜವಾಬ್ದಾರಿ ಎರಡೂ ಜತೆಜತೆಯಾಗಿ ಇರುತ್ತದೆ ಎನ್ನುವುದನ್ನು ಮನವರಿಕೆ ಮಾಡುವುದು.
*ಹದಿಹರೆಯದ ಮಗು ಸ್ವತಂತ್ರ ವ್ಯಕ್ತಿತ್ವವಾಗಿ ರೂಪುಗೊಳ್ಳುವಂತೆ ಪ್ರೇರೇಪಿಸುವುದು.
*ಮಕ್ಕಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಸಾಮಾಜಿಕ ಕಳಕಳಿ, ಬದ್ಧತೆ ಬರುವಂತೆ ನೋಡಿಕೊಳ್ಳುವುದು.
*ಗುಣಮಟ್ಟದ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದು.
*ಹದಿಹರೆಯದ ಮಕ್ಕಳು ಪ್ರಬುದ್ಧ ಚಿಂತನೆಯಿರುವ ಜನರೊಂದಿಗೆ ಸಂಪರ್ಕದಲ್ಲಿರುಂತೆ ಪ್ರೋತ್ಸಾಹಿಸುವುದು.
*ಪೋಷಕರಾದ ನಾವು ನಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟು, ಅತಿ ಒತ್ತಡಗಳನ್ನು ತಂದುಕೊಳ್ಳದಿರುವುದು.

ನಮ್ಮ ಹದಿಹರೆಯದ ಮಕ್ಕಳ ಸಮಸ್ಯೆಗಳನ್ನು ಪೋಷಕರಾಗಿ ನಮಗೆ ಪರಿಹರಿಸಲಾಗುವುದಿಲ್ಲವಾದರೆ ತಜ್ಞರ ಸಹಾಯ ಪಡೆದುಕೊಳ್ಳುವುದು.
ಹದಿಹರೆಯದ ನಮ್ಮ ಮಕ್ಕಳ ಗೆಳೆಯ/ಗೆಳತಿಯರನ್ನು ಆಗಾಗ ನಾವು ಭೇಟಿಯಾಗುವುದು.

ಹದಿಹರೆಯದ ಮಕ್ಕಳು ಹೇಳುವುದನ್ನು ಕೇಳುವುದಕ್ಕಿಂತಲೂ ನಮ್ಮನ್ನು ನೋಡಿ ಕಲಿಯುತ್ತಾರೆ. ಆದ್ದರಿಂದ ನಮ್ಮನ್ನು ನೋಡಿ ಕಲಿಯುವಂತಹ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳುವ ದೊಡ್ಡ ಜವಾಬ್ದಾರಿ ಪೋಷಕರಾದ ನಮಗಿದೆ.

ಮೇಲೆ ಹೇಳಿರುವ ಅಂಶಗಳು ಪೋಷಕತ್ವವನ್ನು ಕುರಿತ ನಮ್ಮ ಅರಿವನ್ನು ಹೆಚ್ಚಿಸಬಹುದು. ಪೋಷಕತ್ವ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ನನ್ನ ಪೋಷಕತ್ವದ ಅರಿವಿನ ದಾರಿಯ ನಿಜವಾದ ದೀಪಗಳು ನನ್ನಲ್ಲಿಗೆ ಆಪ್ತಸಲಹೆಗೆ ಬರುವ ಹದಿಹರೆಯದ ಮಕ್ಕಳು. ಆ ಬೆಳಕಿನಿಂದ ಇನ್ನಷ್ಟು ಮಕ್ಕಳ ಬದುಕನ್ನು ಬೆಳಗಿಸುವುದು ನಮ್ಮ ಉದ್ದೇಶವಾಗಬೇಕು.
(ಲೇಖಕರು ಮಕ್ಕಳ ತಜ್ಞರು ಮತ್ತು ಆಪ್ತ ಸಲಹೆಗಾರರು)

ಮಗುವಿನ ಮುಗ್ಧತೆ ಉಳಿಯಲಿ...
ಹನ್ನೊಂದು ವರ್ಷದ ಮಗು ಮೈಬಣ್ಣ ಬಿಳಿಯಾಗಲು ಏನೆಲ್ಲ ಕ್ರೀಂಗಳು ದೊರೆಯುತ್ತವೆ ಎಂದು ಹುಡುಕಿ ಆನ್‌ಲೈನ್‌ನಲ್ಲಿ ಕೊಂಡುಕೊಳ್ಳಬೇಕಾದರೆ ಅದಕ್ಕೆ ಕಾರಣ ಬಿಳಿಬಣ್ಣದ ಶ್ರೇಷ್ಠತೆಯ ಬಗ್ಗೆ ಜಾಹೀರಾತುಗಳು ನೀಡುವ ತಪ್ಪು ಸಂದೇಶ.

ಎರಡು ವರ್ಷದ ಮಗು ಬುದ್ಧಿಮತ್ತೆ ಚೆನ್ನಾಗಿದ್ದರೂ ಮಾತನಾಡುವುದಿಲ್ಲವಾದರೆ, ಆ ಮಗು ನಿರಂತರ ಹೋಮ್ ಥಿಯೇಟರ್‌ನಲ್ಲಿ ನೋಡುತ್ತಿದ್ದ ಮಾತನಾಡದ ಬೊಂಬೆಗಳ ಕಾರ್ಟೂಟ್‌ನ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಮೇಲಿನ ಎಲ್ಲ ಕೇಸ್‌ಗಳಲ್ಲೂ ಪೋಷಕತ್ವದ ಲೋಪಗಳನ್ನೂ ಮಾಧ್ಯಮದ ಪ್ರಭಾವವನ್ನೂ ನಾನು ಕಂಡಿದ್ದೇನೆ.

ಮಕ್ಕಳ ಸಾಮಾನ್ಯ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ಸುಲಭ. ರೋಗಲಕ್ಷಣಗಳನ್ನು ಪತ್ತೆಹಚ್ಚಿ ಔಷಧಿ ನೀಡಿದರೆ ಆಯಿತು. ಆದರೆ ಈಚಿನ ದಿನಗಳಲ್ಲಿ ಪೋಷಕರು ಆಗಾಗ ಹೇಳುವ ಮಾತುಗಳು ಸಾಮಾನ್ಯ ಕಾಯಿಲೆಗಳಿಗಿಂತ ಭಿನ್ನ. ‘ನಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳಲು ನಮಗೆ ಆಗುತ್ತಿಲ್ಲ’ - ಇದಕ್ಕೇನು ಮಾಡುವುದು?

ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳಲ್ಲಿ ಮಾತನಾಡುವಾಗ ನನಗೆ ತಿಳಿದು ಬಂದ ವಾಸ್ತವವೆಂದರೆ, ಮಕ್ಕಳಿಗಿಂತಲೂ ಕೌನ್ಸೆಲಿಂಗ್ ಅಗತ್ಯವಿರುವುದು ಪೋಷಕರಿಗೆ ಎನ್ನುವುದು. ಅಪ್ಪ–ಅಮ್ಮ ಬಂದು ‘ನಮ್ಮ ಮಗುವಿಗೆ ಸ್ವಲ್ಪ ಬುದ್ಧಿ ಹೇಳಿ ಡಾಕ್ಟ್ರೇ’ ಎಂದು ಕೇಳಿಕೊಳ್ಳುವಂತೆ, ಹದಿಹರೆಯದ ಮಕ್ಕಳು ನನ್ನಲ್ಲಿ ಗುಟ್ಟಾಗಿ ಹೀಗೂ ಹೇಳುವುದಿದೆ: ‘ಡಾಕ್ಟ್ರೇ, ನಮ್ಮ ಅಪ್ಪ ಅಮ್ಮರನ್ನು ನಮಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ, ನೀವು ಅವರನ್ನು ಸರಿ ಮಾಡಿ!’

ಈಗ ತಾನೆ ಹುಟ್ಟಿದ ಮಗು ಎಷ್ಟೊಂದು ಮುಗ್ಧ! ಮುಗ್ಧತೆ ಮತ್ತು ದೈವತ್ವ ಜೊತೆ ಜೊತೆಗೆ ಇರುವ ದೇವರಂತೆ ಅದು ನನಗೆ ಕಾಣುತ್ತದೆ. ನಾವೆಲ್ಲರೂ ಈ ಸೃಷ್ಟಿಯ ಭಾಗ. ಈ ನಿಟ್ಟಿನಲ್ಲಿ ಪೋಷಕತ್ವವೂ ಅಷ್ಟೇ ಸಹಜ ಕ್ರಿಯೆ.  ಆದರೆ ಬದಲಾದ ನಿರೀಕ್ಷೆಗಳಿಂದ ಇಂದು ಅಸಹಜ ಪರಿಸ್ಥಿತಿ ನಿರ್ಮಾಣವಾಗಿದೆ.  ಮಗು ಬೆಳೆಯುತ್ತ ನೋಡುತ್ತ ಕೇಳುತ್ತ ಕಲಿಯುತ್ತದೆ. ಮುಗ್ಧತೆಯ ಪೊರೆ ಕಳಚುತ್ತ ಹೋಗುತ್ತದೆ.

ಮಗುವಿನ ಸಹಜತೆ, ಸರಳತೆ ಮಮತೆ, ಸಮತೆ, ಆತ್ಮವಿಶ್ವಾಸ, ಆತ್ಮಗೌರವ – ಇವೆಲ್ಲಕ್ಕೂ ಸವಾಲುಗಳು ಎದುರಾಗಿ, ಮಗು ಇವನ್ನು ಎದುರಿಸುತ್ತಲೇ ಬೆಳೆಯಬೇಕಾಗಿದೆ. ಎಲ್ಲವನ್ನೂ ಸಹಿಸಿ, ಎಲ್ಲ ಪ್ರಭಾವಗಳನ್ನೂ ಸಮಚಿತ್ತದಿಂದ ಸ್ವೀಕರಿಸಿ ಪ್ರಬುದ್ಧ ವ್ಯಕ್ತಿಯಾಗುವ ಪ್ರತಿ ಮಗುವೂ ವಿಶೇಷವಾಗಿ ಏನೂ ಮಾಡಿರುವುದಿಲ್ಲ. ಸ್ವಭಾವತಃ ತನಗೆ ದಕ್ಕಿದ ಒಳ್ಳೆಯತನವನ್ನು ಉಳಿಸಿಕೊಂಡಿರುತ್ತದೆ, ಅಷ್ಟೆ.

3 comments:

  1. OnlyGovtJobs.com website provides latest government employment news for all graduate and under graduate students 10+2 students engineers diploma candidates.
    http://www.onlygovtjobs.com

    ReplyDelete
  2. This comment has been removed by the author.

    ReplyDelete
  3. Great post. I used to be checking constantly this blog and I am impressed!
    SarkariNaukriFinder.com is India’s leading government job portal. Use our advanced job search engine to find all the latest 12th pass govt job 2020, 10th pass govt job, government jobs for 12th pass, government jobs in india, government jobs for engineers, download admit card, etc.

    ReplyDelete