ಪ್ಯಾರಿಸ್: ಕ್ರಿಸ್ಟಿಯಾನೋ ರೊನಾಲ್ಡೋ ಗಾಯಗೊಂಡು ನಿರ್ಗಮಿಸಿದ ಬಳಿಕವೂ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಪೋರ್ಚುಗಲ್ ತಂಡ ಹೆಚ್ಚುವರಿ ಸಮಯದಲ್ಲಿ ಎಡರ್ ಗಳಿಸಿದ ಆಕರ್ಷಕ ಏಕೈಕ ಗೋಲಿನ ನೆರವಿನಿಂದ ಪ್ರಸಕ್ತ ಸಾಲಿನ ಯುರೊ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಭಾನುವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್ ತಂಡವನ್ನು ಪೋರ್ಚುಗಲ್ ತಂಡ 1-0 ಗೋಲುಗಳ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಉಸಿರುಗಟ್ಟಿಸಿಕೊಂಡು ಪಂದ್ಯ ವೀಕ್ಷಿಸುತ್ತಿದ್ದ, ತವರಿನ ತಂಡವನ್ನು ಬೆಂಬಲಿಸುತ್ತಿದ್ದ ಸಹಸ್ರಾರು ಪ್ರೇಕ್ಷಕರು ಪಂದ್ಯ ಕ್ಷಣಗಳನ್ನು ಆನಂದಿಸಿ, ಫ್ರಾನ್ಸ್ ಸೋಲಿನ ನೋವಿಗೆ ಕಣ್ಣೀರು ಸುರಿಸಿದರು.
ಬದಲಿ ಫಾರ್ವರ್ಡ್ ಆಗಿ ಅಂಗಣಕ್ಕಿಳಿದ ಎಡರ್ ಮಿಂಚಿನಂತೆ ಚೆಂಡನ್ನು ಗೋಲಿನ ಬಲೆಯೊಳಗೆ ನುಗ್ಗಿಸಿ ಹೊಸದೊಂದು ಇತಿಹಾಸವನ್ನೇ ನಿರ್ಮಿಸಿದರು. ಪ್ರತಿಷ್ಠಿತ ಟೂರ್ನಿಯ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿರುವ ಪೋರ್ಚುಗಲ್ 2004ರಲ್ಲಿ ತನ್ನದೇ ನೆಲದಲ್ಲಿ ನಡೆದ ಟೂರ್ನಿಯ ಫೈನಲ್ ಪ್ರವೇಶಿಸಿಯೂ ಗೆಲ್ಲಲಾಗದ ಪ್ರಶಸ್ತಿಯನ್ನು ಈಗ ಗೆದ್ದು ಆನಂದ ಭಾಷ್ಪ ಹರಿಸಿತು. ತಂಡ ಗೆಲುವಿನ ಅಂಚಿನಲ್ಲಿದ್ದಾಗ ಭಾವೋದ್ವೇಗಕ್ಕೆ ಒಳಗಾದ ರೊನಾಲ್ಡೋ ಸಹೋದ್ಯೋಗಿ ಆಟಗಾರರ ಜತೆ ಅಂಗಣದಲ್ಲಿ ಸಂಭ್ರಮಿಸಿದರು. ಪೋರ್ಚುಗಲ್ ತಂಡ 2004ರ ಫೈನಲ್ ಹಣಾಹಣಿಯಲ್ಲಿ ಗ್ರೀಸ್ ವಿರುದ್ಧ ಪರಾಭವಗೊಂಡಿತ್ತು.
1984, 2000ರಲ್ಲಿ ಚಾಂಪಿಯನ್ ಆಗಿದ್ದ ಫ್ರಾನ್ಸ್ ಈಗ ತಾಯ್ನೆಲದಲ್ಲಿಯೇ ಸೋಲು ಕಂಡಿದ್ದು, ಸಹಜವಾಗಿಯೇ ಬೆಂಬಲಿಗರಲ್ಲಿ ನಿರಾಶೆಯನ್ನುಂಟು ಮಾಡಿತು. ಮಹತ್ವದ ಟೂರ್ನಿಗಳ ಪ್ರಮುಖ ಘಟ್ಟದಲ್ಲಿ ಪೋರ್ಚುಗಲ್ ಮತ್ತು ಫ್ರಾನ್ಸ್ ಮುಖಾಮುಖಿಯಾಗಿದ್ದು ಇದು ನಾಲ್ಕನೇ ಬಾರಿಗೆ. ಈ ಮೊದಲ ಮೂರು ಬಾರಿಯೂ ಸೆಮಿಫೈನಲ್ ಎದುರಾಳಿಯಾಗಿ ಆಡಿದ್ದು, ಆಗ ಫ್ರಾನ್ಸ್ ಪ್ರಾಬಲ್ಯ ಮೆರೆದಿತ್ತು. ಯುರೊ 1984, ಯುರೊ 2000 ಮತ್ತು 2006ರ ವಿಶ್ವಕಪ್ಗಳ ಟೂರ್ನಿಯ ಸೆಮೀಸ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು
No comments:
Post a Comment