Monday, 11 July 2016

ಭಾರತ- ತಾಂಜಾನಿಯಾ ಐದು ಮಹತ್ವದ ಒಪ್ಪಂದಗಳಿಗೆ ಸಹಿ


ದಾರ್-ಎಸ್-ಸಲಾಮ್ (ತಾಂಜಾನಿಯ): ಭಾರತದಿಂದ ತಾಂಜಾನಿಯಾದ ಝುಂಝಿಬಾರ್​ನಲ್ಲಿ ನೀರು ಸರಬರಾಜು ವ್ಯವಸ್ಥೆಗೆ 920 ಲಕ್ಷ ಡಾಲರ್ ನೆರವು ನೀಡಿಕೆ ಸೇರಿದಂತೆ ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಒಪ್ಪಂದಗಳಿಗೆ ಭಾರತ ಮತ್ತು ತಾಂಜಾನಿಯಾ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಿದವು.ತಾಂಜಾನಿಯ ಅಧ್ಯಕ್ಷ ಜಾನ್ ಮಗುಫುಲಿ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ಉಭು ನಾಯಕರ
ಸಮ್ಮುಖದಲ್ಲಿ ಒಪ್ಪಂದ ಪ್ರತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಬಳಿಕ ತಾಂಜಾನಿಯ ಅಧ್ಯಕ್ಷರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ಮತ್ತು ಅಧ್ಯಕ್ಷ ಮಗುಫುಲಿ ಅವರು ಮುಖ್ಯವಾಗಿ ಸಾಗರಯಾನ ಕ್ಷೇತ್ರದಲ್ಲಿ ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಪ್ಪಿದ್ದೇವೆ. ದ್ವಿಪಕ್ಷೀಯವಾಗಿ, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಭಯೋತ್ಪಾದನೆ ಮತ್ತು ಪರಿಸರ ಬದಲಾವಣೆ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ನಿಕಟವಾಗಿ ದುಡಿಯಲು ನಾವು ಒಪ್ಪಿದ್ದೇವೆ’ ಎಂದು ಹೇಳಿದರು.

ಝಾಂಝಿಬಾರ್ ಪ್ರದೇಶದಲ್ಲಿ ನೀರು ಸರಬರಾಜು ವ್ಯವಸ್ಥೆಗಾಗಿ 920 ಲಕ್ಷ ಡಾಲರ್​ಗಳನ್ನು ಸಾಲವಾಗಿ ಒದಗಿಸುವ ಒಪ್ಪಂದಕ್ಕೆ ನಾವು ಸಹಿ ಮಾಡಿದ್ದೇವೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಇನ್ನೊಂದು ಪ್ರಮುಖ ಕ್ಷೇತ್ರ. ಔಷಧ ಮತ್ತು ಔಷಧೋಪಕರಣ ಪೂರೈಕೆ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಆದ್ಯತೆಯ ವಿಚಾರಗಳಲ್ಲಿ ತಾಂಜಾನಿಯ ಸರ್ಕಾರದ ಜೊತೆಗೆ ಸಹಕರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಪ್ರಧಾನಿ ನುಡಿದರು.

ಆದಷ್ಟೂ ಬೇಗನೆ ಅಧ್ಯಕ್ಷ ಮಗುಫುಲಿ ಅವರನ್ನು ಭಾರತಕ್ಕೆ ಬರಮಾಡಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ತಾಂಜಾನಿಯಾದ 17 ನಗರಗಳಿಗೆ ನೀರು ಪೂರೈಕೆ ಕಾರ್ಯಗಳಲ್ಲೂ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಇದಕ್ಕಾಗಿ ರಿಯಾಯ್ತಿ ದರದಲ್ಲಿ 5000 ಲಕ್ಷ ಡಾಲರ್ ಹೆಚ್ಚುವರಿ ಸಾಲ ಒದಗಿಸುವ ಬಗ್ಗೆ ಪರಿಶೀಲಿಸಲೂ ಭಾರತ ಬಯಸಿದೆ ಎಂದು ಮೋದಿ ನುಡಿದರು. ಸಕ್ರಿಯ ಸಹಕಾರ ನಿಟ್ಟಿನಲ್ಲಿ ನಾವು ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಅವರು ಹೇಳಿದರು.

No comments:

Post a Comment