Monday, 11 July 2016

ಹಸು ಕಲ್ಯಾಣಕ್ಕೆ ಸೆಸ್‌



ಚಂಡಿಗಡ (ಪಿಟಿಐ): ಹಸುಗಳ ಕ್ಷೇಮಾಭಿವೃದ್ಧಿಗಾಗಿ ಹರಿಯಾಣದ ಬಿಜೆಪಿ  ಸರ್ಕಾರ ‘ಹಸು ಸೆಸ್‌’ ವಿಧಿಸಲು ಮುಂದಾಗಿದೆ.
ಪಂಜಾಬ್‌ನಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಹರಿಯಾಣ ಗೋವು ಸೇವಾ ಆಯೋಗ ‘ಹಸು ಸೆಸ್‌’ ಕುರಿತಾದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದೆ.ಬ್ಯಾಕ್ವೆಂಟ್‌ ಹಾಲ್‌ ಬುಕ್ಕಿಂಗ್‌ ಮೇಲೆ ₹2100, ಮನರಂಜನೆ ತೆರಿಗೆ ಸಂಗ್ರಹದ ಮೇಲೆ ಶೇಕಡ 5ರಷ್ಟು ಮತ್ತು  ಆಹಾರ ಧಾನ್ಯಗಳ ಪ್ರತಿ ಚೀಲದ ಮೇಲೆ ₹1  ಹಾಗೂ ಸರ್ಕಾರದ ನಿರ್ವಹಣೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳಿಂದ ಶೇಕಡ 50ರಷ್ಟು ಹಣ ಪಡೆದು ರಾಜ್ಯದಲ್ಲಿರುವ ಹಸುಗಳ ಅಭಿವೃದ್ಧಿಗೆ ಬಳಸಬಹುದು ಎಂದು ಅಯೋಗ
ಪ್ರಸ್ತಾವ ಸಲ್ಲಿಸಿದೆ.

ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಗೋಶಾಲೆಗಳಲ್ಲಿ 3.20 ಲಕ್ಷ ಹಾಗೂ ಇತರೆಡೆ 1.7 ಲಕ್ಷ ಹಸುಗಳಿವೆ ಎಂದು ಆಯೋಗದ ಅಧ್ಯಕ್ಷ ಬಹಾನಿ ರಾಮ್‌ ಮಂಗಲ್‌  ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ  ನಾಲ್ಕು ಚಕ್ರ, ದ್ವಿಚಕ್ರ, ತೈಲ ಟ್ಯಾಂಕರ್‌,  ವಾಹನ ಖರೀದಿ, ವಿದ್ಯುತ್ ಬಳಕೆ, ಹವಾನಿಯಂತ್ರಿತ ಮದುವೆ ಸಭಾಂಗಣದಲ್ಲಿ , ಸಿಮೆಂಟ್ ಬ್ಯಾಗ್, ವಿದೇಶಿ ಮದ್ಯ ಹಾಗೂ ದೇಶಿ ಮದ್ಯಗಳ ಮೇಲೆ ಹಸು ಸೆಸ್‌ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹರಿಯಾಣ ಗೋವಂಶ ಸಂರಕ್ಷಣೆ ಹಾಗೂ ಗೋಸಂವರ್ಧನಾ ಕಾಯ್ದೆ ಪ್ರಕಾರ ಗೋಹತ್ಯೆ ಮಾಡುವವರಿಗೆ ಮೂರರಿಂದ ಹತ್ತು ವರ್ಷಗಳ ಕಾಲ ಕಠಿಣ ಶಿಕ್ಷೆ  ಹಾಗೂ ₹ 1 ಲಕ್ಷ ದಂಡ ವಿಧಿಸಬಹುದು ಎಂದರು.

ಹಸುಗಳ ಅಕ್ರಮ ರಫ್ತು ಮೇಲೆ ನಿಗಾ ಇಡಲು ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ಘಟಕ ರಚನೆ ಹಾಗೂ ಇದಕ್ಕಾಗಿಯೇ ಹೊಸ ಟೋಲ್‌ ಫ್ರೀ ನಂಬರ್‌ ಅನ್ನು ಕಲ್ಪಿಸಲು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದರು

No comments:

Post a Comment